ಬೆಳಗಾವಿ : ವಿಕಲಚೇತನರಲ್ಲಿ ವಿಶೇಷವಾದ ಶಕ್ತಿ ಇದ್ದು, ಸೌಲಭ್ಯಗಳನ್ನು ಸದುಪಯೋಗ
ಪಡಿಸಿಕೊಂಡು, ಕೀಳರಿಮೆಯಿಂದ ಹಿಂಜರಿಯದೆ ಆತ್ಮವಿಶ್ವಾಸದಿಂದ ಸವಾಲುಗಳನ್ನು ಎದುರಿಸಿ ಬದುಕು ರೂಪಿಸಿಕೊಳ್ಳಬೇಕೆಂದು ಮೇಯರ್ ಪ್ರೀತಿ ಕಾಮಕರ ಹೇಳಿದರು.
ಶನಿವಾರ ಮಹಾನಗರ ಪಾಲಿಕೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲಿಕೆಯ ಬಡತನ ನಿರ್ಮೂಲನ ಕೋಶದಿಂದ ಶೇ.5 ಅನುದಾನದ ಯೋಜನೆಯಡಿ ಎರಡನೇ ಹಂತದಲ್ಲಿ ವಿಕಲಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿದ ಅವರು, ಪಾಲಿಕೆ ವಿಕಲಚೇತನರಿಗಾಗಿ ಯೋಜನೆಗಳನ್ನು ತಂದಿದ್ದು, ಅದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಹೇಳಿದರು.
ಉಪ ಮೇಯರ್ ಹಣಮಂತ ಕೊಂಗಾಲಿ ಮಾತನಾಡಿ, ಪಾಲಿಕೆಯು ವಿಕಲಚೇತನರಲ್ಲಿ ಧೈರ್ಯ ತುಂಬುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ತಂದಿದೆ.
ಅದರ ಅಡಿಯಲ್ಲಿ ತ್ರಿಚಕ್ರ ವಾಹನಗಳನ್ನು ನೀಡುತ್ತಿದ್ದು , ಅವುಗಳಿಂದ ತಮಗೆ ಸಾರಿಗೆ ಸಂಪರ್ಕ ಹಾಗೂ ಸ್ವಉದ್ಯೋಗಕ್ಕಾಗಿ ಪ್ರಯೋಜನವಾಗಲಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಾತನಾಡಿ,
ಪಾಲಿಕೆಯ ಅನುದಾನದ ಶೇ.5 ಯೋಜನೆ ಅಡಿ ಈ ಹಿಂದೆ 26 ಜನರಿಗೆ ಕೊಡಲಾಗಿದ್ದು, ಎರಡನೇ ಹಂತದಲ್ಲಿ ಏಳು ಜನ ಅರ್ಹ ವಿಕಲಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರವಾಹನ ನೀಡಲಾಗುತ್ತಿದೆ. ಸ್ವಉದ್ಯೋಗಕ್ಕಾಗಿ ಸ್ವಂತಿಕೆಗಾಗಿ ಅವುಗಳನ್ನು ಬಳಸಿಕೊಂಡು ಪಾಲಿಕೆಯ ಸದುದ್ದೇಶವನ್ನು ಫಲಾನುಭವಿಗಳು ಸಾಕಾರಗೊಳಿಸಿಕೊಳ್ಳಬೇಕೆಂದು ಹೇಳಿದರು.
ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೆಕರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಲಕ್ಷ್ಮೀ ರಾಠೋಡ್, ಸಮಿತಿ ಸದಸ್ಯರು, ನಗರಸೇವಕರು,ಆಡಳಿತ ವಿಭಾಗದ ಉಪ ಆಯುಕ್ತ ಉದಯಕುಮಾರ ಟಿ. ಸೇರಿದಂತೆ ಇತರೆ ಅಧಿಕಾರಿಗಳು , ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
