ನಗರದ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರು, ರಸ್ತೆ ಮತ್ತು ಸ್ವಚ್ಛತೆ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ನಿರಂತರವಾಗಿ ದೂರುಗಳು ಬರುತ್ತಿರುವ ಹಿನ್ನೆಲೆ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಮಂಗಳವಾರ ಸ್ವತಃ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಭೆ ನಡೆಸಿದ ಅವರು, ಸಮಸ್ಯೆಗಳ ಪರಿಹಾರಕ್ಕೆ ವಿಳಂಬ ಮಾಡದೇ ತಕ್ಷಣ ಕ್ರಮ ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.


ಸುಭಾಷ್ ನಗರ, ಅಶೋಕ್ ನಗರ ಸೇರಿದಂತೆ ನಗರದ ಹಲವು ಪ್ರದೇಶಗಳಿಗೆ ಭೇಟಿ ನೀಡಿದ ಆಯುಕ್ತರು, ಕೆಯುಡಿಎಫ್‌ಸಿ ನೀರು ಸರಬರಾಜು ಯೋಜನೆ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು. ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೈಪ್‌ಗಳಿಗೆ ಚರಂಡಿ ನೀರು ಸೇರುತ್ತಿರುವ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವಂತೆ ನಿರ್ದೇಶಿಸಿದರು.


ಇದೇ ವೇಳೆ ಎಲ್ & ಟಿ ಕಂಪನಿಯವರು ನೀರು ಸರಬರಾಜು ಪೈಪ್‌ಲೈನ್ ಅಳವಡಿಸಲು ತೋಡಿರುವ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಿ, ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು. ಮಳೆಯಿಂದ ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯವನ್ನು ಆದ್ಯತೆಯ ಮೇರೆಗೆ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು.
ನಗರದ ಕೆಲವು ಭಾಗಗಳಲ್ಲಿ ಕಸದ ರಾಶಿ ಕಂಡುಬಂದ ಹಿನ್ನೆಲೆಯಲ್ಲಿ, ತಕ್ಷಣವೇ ಕಸ ವಿಲೇವಾರಿ ಮಾಡುವುದರ ಜೊತೆಗೆ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಚೆಲ್ಲದಂತೆ ಜಾಗೃತಿ ಮೂಡಿಸಲು ಸಿಬ್ಬಂದಿಗೆ ಸೂಚಿಸಿದರು.


ಪರಿಶೀಲನೆ ವೇಳೆ ಸ್ಥಳೀಯ ನಿವಾಸಿಗಳು ತಮ್ಮ ಪ್ರದೇಶದ ವಿವಿಧ ಸಮಸ್ಯೆಗಳನ್ನು ನೇರವಾಗಿ ಆಯುಕ್ತರ ಗಮನಕ್ಕೆ ತಂದರು. ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಕಾರ್ತಿಕ್ ಎಂ., ಎಲ್ಲ ಸಮಸ್ಯೆಗಳಿಗೂ ಶೀಘ್ರ ಪರಿಹಾರ ಕಲ್ಪಿಸಿ ಜನರಿಗೆ ಉತ್ತಮ ಮೂಲಸೌಕರ್ಯ ಹಾಗೂ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.


ಪರಿಶೀಲನಾ ಸಂದರ್ಭದಲ್ಲಿ ಪಾಲಿಕೆ ಅಭಿಯಂತರರಾದ ಅನೂಪ್ ಕನೋಜ, ಆದಿಲ್ ಖಾನ್ ಪಠಾಣ್, ಕೆಯುಡಿಎಫ್‌ಸಿ ಹಾಗೂ ಎಲ್ & ಟಿ ಅಧಿಕಾರಿಗಳು, ವಿವೇಕ ಮಠದ ಸೇರಿದಂತೆ ಮಹಾನಗರ ಪಾಲಿಕೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *