ದೆಹಲಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ದೆಹಲಿಯಲ್ಲಿ ಭಾನುವಾರ ರಾತ್ರಿ ಅಪಘಾತಕ್ಕೀಡಾಗಿದೆ.
ದೆಹಲಿ ಐ.ಪಿ. ಎಸ್ಟೇಟ್ ರಸ್ತೆಯ ಪಿಡಬ್ಲ್ಯೂಡಿ ಕಚೇರಿ ಸಮೀಪ ರಾತ್ರಿ ಸುಮಾರು 9.30ಕ್ಕೆ ಇನ್ನೋವಾ ಮತ್ತು ಸ್ವಿಫ್ಟ್ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ಇನ್ನೋವಾ ಕಾರಿನಲ್ಲಿ ಕಿರಾರಿ ಕ್ಷೇತ್ರದ ಶಾಸಕ ಅನಿಲ್ ಝಾ ಹಾಗೂ ಕರ್ನಾಟಕದ ಶಾಸಕ ಅಭಯ್ ಪಾಟೀಲ್ ಇದ್ದರು.
ಮಾಹಿತಿಯ ಪ್ರಕಾರ, ಸ್ವಿಫ್ಟ್ ಕಾರು ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರೇಲಿಂಗ್ ದಾಟಿ ಎದುರು ದಿಕ್ಕಿನಿಂದ ಬರುತ್ತಿದ್ದ ಇನ್ನೋವಾಗೆ ಡಿಕ್ಕಿ ಹೊಡೆದಿದೆ. ಸ್ವಿಫ್ಟ್ ಕಾರಿನಲ್ಲಿ ಚಾಲಕನ ಜೊತೆಗೆ ಅವರ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಪ್ರಯಾಣಿಸುತ್ತಿದ್ದರು.
ಅಪಘಾತದಲ್ಲಿ ಎರಡೂ ವಾಹನಗಳಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರನ್ನೂ ಚಿಕಿತ್ಸೆಗಾಗಿ ಎಲ್ಎನ್ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಪೊಲೀಸರು ಭೇಟಿ ನೀಡಿ, ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿದ್ದಾರೆ. ಘಟನೆ ಕುರಿತು ದೆಹಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
