ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂಬ ಆಶಯದ ಗೊತ್ತುವಳಿ ಅಂಗೀಕರಿಸುವಂತೆ ಕನ್ನಡ ಸಂಘಟನೆಗಳು ಹಲವು ತಿಂಗಳುಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸರ್ಕಾರದ ಮಟ್ಟದಲ್ಲಿ ಸ್ಪಂದನೆ ದೊರೆತಿದೆ ಎಂದು ಬೆಳಗಾವಿಯ ಸಮಾನ ಮನಸ್ಕ ಕನ್ನಡ ಸಂಘಟನೆಗಳ ಒಕ್ಕೂಟ ತಿಳಿಸಿದೆ.

ಈ ಕುರಿತು ಕನ್ನಡ ಹೋರಾಟಗಾರ ಅಶೋಕ ಚಂದರಗಿ ಸೋಮವಾರ ರಾತ್ರಿ ಮಾಹಿತಿ ನೀಡಿದ್ದು, ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸುವಂತೆ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.

ಸರ್ಕಾರದ ಆದೇಶದ ಸಂಪೂರ್ಣ ವಿವರಗಳನ್ನು ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಲಾಗುವುದು. ಆದೇಶದ ಪ್ರತಿ ಮಂಗಳವಾರ ಮುಂಜಾನೆ ತಮ್ಮ ಕೈ ಸೇರಲಿದೆ ಎಂದು ಚಂದರಗಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಬೆಳಗಾವಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಕನ್ನಡ ಸಂಘಟನೆಗಳ ವತಿಯಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ‘ಬೆಳಗಾವಿ ನಮ್ಮದು’ ಎಂಬ ಸಂದೇಶ ಸಾರುವ ಗೊತ್ತುವಳಿ ಅಂಗೀಕರಿಸಬೇಕೆಂದು ಕನ್ನಡಪರ ಸಂಘಟನೆಗಳು ಕಳೆದ ಹಲವು ತಿಂಗಳುಗಳಿಂದ ಒತ್ತಾಯಿಸುತ್ತಿದ್ದವು. ಪಾಲಿಕೆ ಮಟ್ಟದಲ್ಲಿ ನಿರೀಕ್ಷಿತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ವಿಷಯ ರಾಜ್ಯ ಸರ್ಕಾರದ ಗಮನಕ್ಕೂ ಹೋಗಿತ್ತು.

ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕೂಡ ವಿವರವಾದ ವರದಿ ಪಡೆದಿದ್ದರು ಎನ್ನಲಾಗಿದೆ.

ಇದೀಗ ಸರ್ಕಾರವೇ ಗೊತ್ತುವಳಿ ಅಂಗೀಕರಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸಿರುವುದರಿಂದ ಕನ್ನಡಪರ ಹೋರಾಟಕ್ಕೆ ಮಹತ್ವದ ಮುನ್ನಡೆ ದೊರೆತಿದೆ ಎಂದು ಅಶೋಕ ಚಂದರಗಿ ತಿಳಿಸಿದ್ದಾರೆ. ಸರ್ಕಾರದ ಆದೇಶದಲ್ಲಿರುವ ನಿಖರ ಅಂಶಗಳು ಮಂಗಳವಾರದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟವಾಗುವ ನಿರೀಕ್ಷೆಯಿದೆ.

Leave a Reply

Your email address will not be published. Required fields are marked *