🚨 ಬ್ರೇಕಿಂಗ್ ನ್ಯೂಸ್ | ಬೆಳಗಾವಿ
ಗ್ರಾಪಂ ಆವರಣದಲ್ಲೇ ತಂದೆ–ಮಗಳ ಬರ್ಬರ ಹತ್ಯೆ
38 ಗುಂಟೆ ಆಸ್ತಿ ಪಾಲಿನ ವಿವಾದಕ್ಕೆ ರಕ್ತಪಾತ; ಮಾಜಿ ಯೋಧ ಸೇರಿ ಪುತ್ರಿ ಸಾವು
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅವರಾದಿ ಗ್ರಾಮದಲ್ಲಿ ಆಸ್ತಿ ಪಾಲು ವಿಚಾರವಾಗಿ ಕುಟುಂಬದ ನಡುವೆ ನಡೆಯುತ್ತಿದ್ದ ವಿವಾದ ಬುಧವಾರ ಭೀಕರ ಹತ್ಯೆಗೆ ಕಾರಣವಾಗಿದೆ.
ಮಾಜಿ ಯೋಧ ರುದ್ರಪ್ಪ ಕುಂದರಗಿ (67) ಹಾಗೂ ಅವರ ಪುತ್ರಿ ಶಶಿಕಲಾ ಕುಂದರಗಿ (26) ಹತ್ಯೆಯಾಗಿದ್ದಾರೆ. ಜಮೀನು ದಾಖಲೆ ಪ್ರಕ್ರಿಯೆಗಾಗಿ ರುದ್ರಪ್ಪ ಅವರು ಗ್ರಾಮ ಪಂಚಾಯಿತಿಗೆ ಬಂದಿದ್ದ ವೇಳೆ ಕುಟುಂಬದ ಸದಸ್ಯರು ಅಲ್ಲಿಗೆ ಬಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಕೊಡಲಿ ಹಾಗೂ ಕುಡಗೋಲು ಸೇರಿದಂತೆ ಮಾರಕಾಸ್ತ್ರಗಳಿಂದ ನಡೆದ ದಾಳಿಯಲ್ಲಿ ರುದ್ರಪ್ಪ ಅವರು ಪಂಚಾಯಿತಿ ಆವರಣದಲ್ಲೇ ಮೃತಪಟ್ಟಿದ್ದಾರೆ. ತಂದೆಯನ್ನು ರಕ್ಷಿಸಲು ಮುಂದಾದ ಪುತ್ರಿ ಶಶಿಕಲಾ ಅವರ ಮೇಲೂ ದಾಳಿ ನಡೆದಿದ್ದು, ಅವರು ಕೂಡ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ರುದ್ರಪ್ಪ ಅವರ ಕಾರು ಚಾಲಕನಿಗೂ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
38 ಗುಂಟೆ ಜಮೀನು ಹಂಚಿಕೆ ವಿಚಾರವಾಗಿ ರುದ್ರಪ್ಪ ಹಾಗೂ ಅವರ ಸಹೋದರರ ನಡುವೆ ಹಲವು ದಿನಗಳಿಂದ ವಿವಾದವಿತ್ತು ಎನ್ನಲಾಗಿದೆ.
ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಮುಂದುವರಿಸಿದ್ದಾರೆ.
