ಬೆಳಗಾವಿ: ಅಂತ್ಯಕ್ರಿಯೆ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದುದನ್ನು ಆಕ್ಷೇಪಿಸಿ, ಅವರಿಗೆ ಬುದ್ಧಿ ಹೇಳುವಂತೆ ತಿಳಿಸಿದ್ದಕ್ಕೆ ಆಕ್ರೋಶಗೊಂಡ 15ಕ್ಕೂ ಹೆಚ್ಚು ಮಂದಿ ಮನೆಗೆ ನುಗ್ಗಿ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಘಟನೆ ಯರಗಟ್ಟಿ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅಂತ್ಯಕ್ರಿಯೆ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ ಬಗ್ಗೆ ರುದ್ರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ, ನಿಮ್ಮ ತಂದೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ, ಅವರಿಗೆ ಬುದ್ಧಿ ಹೇಳುವಂತೆ ಕೆಲವರಿಗೆ ತಿಳಿಸಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರಾತ್ರಿ ವೇಳೆ ಕೆಲವರು ರುದ್ರಪ್ಪ ಅವರ ಮನೆಗೆ ಬಂದು, “ಬೈಯುತ್ತಿದ್ದೀಯಾ, ಯಾಕೆ?” ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ವೇಳೆ 15ಕ್ಕೂ ಹೆಚ್ಚು ಮಂದಿ ಏಕಾಏಕಿ ಮನೆಗೆ ನುಗ್ಗಿ ಬಾಗಿಲು ಮುರಿದು, ಕಬ್ಬಿಣದ ರಾಡ್, ಕಟ್ಟಿಗೆ ಸೇರಿದಂತೆ ವಿವಿಧ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರುದ್ರಪ್ಪ ಅವರ ಕೈ, ಕಾಲು, ತಲೆ ಹಾಗೂ ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಾಯಗಳಾಗಿವೆ.
ಇದಲ್ಲದೆ, ಮನೆಯಲ್ಲಿದ್ದ ಸಣ್ಣ ಮಕ್ಕಳು ಹಾಗೂ ರುದ್ರಪ್ಪ ಅವರ ತಂದೆ-ತಾಯಿಯ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆ ಬಾಗಿಲು ಮುರಿದಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಗೊಂಡಿದ್ದು, ಹಲ್ಲೆ ನಡೆಸಿದ ಆರೋಪಿಗಳು ಮನೆಯ ಸುತ್ತಮುತ್ತ ಓಡಾಡುತ್ತಿರುವುದರಿಂದ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸಿ ನ್ಯಾಯ ಒದಗಿಸುವಂತೆ ರುದ್ರಪ್ಪ ಮನವಿ ಮಾಡಿದ್ದಾರೆ.
