ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯ ಊಟದ ವಿರಾಮದ ವೇಳೆ ಮಹಿಳಾ ಅಧಿಕಾರಿ ಹಾಗೂ ಪಾಲಿಕೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದ ಘಟನೆ ನಡೆದಿದೆ.
ಪಾಲಿಕೆಯ ಅಭಿವೃದ್ಧಿ ಶಾಖೆಯ ಉಪ ಆಯುಕ್ತೆ ಲಕ್ಷ್ಮೀ ಅನಗೋಳಕರ್ ಅವರು ಎಂಐಎಂ ಪಾಲಿಕೆ ಸದಸ್ಯ ಶಾಹಿದ್ ಖಾನ್ ಪಠಾಣ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ, ಶಾಹಿದ್ ಖಾನ್ ಅವರು ಅಧಿಕಾರಿಯ ಕಾರ್ಯವೈಖರಿ ಕುರಿತು ‘ಅನ್‌ಫಿಟ್’ ಎಂಬ ಟೀಕೆ ಮಾಡಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಉಪ ಆಯುಕ್ತೆ, ಸಭೆಯ ಬಳಿಕ ಸದಸ್ಯರ ವಿರುದ್ಧ ಏರುಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
“ನಾನು ಕೆಲಸ ಬಿಡಲು ಸಿದ್ಧ. ಆದರೆ ಅವರನ್ನು ಬಿಡುವುದಿಲ್ಲ. ನನ್ನ ವಿರುದ್ಧ ಮಾತನಾಡಲು ಅವರಾರು?” ಎಂದು ಪ್ರಶ್ನಿಸಿ ಆಕ್ರೋಶ ಹೊರಹಾಕಿದರು.
ಇದೇ ವೇಳೆ, “ಕೌನ್ಸಿಲ್‌ನಲ್ಲಿ ಒಬ್ಬ ಮಹಿಳಾ ಅಧಿಕಾರಿಯನ್ನು ಅವಮಾನ ಮಾಡುತ್ತಿದ್ದೀರಿ. ದುಡ್ಡು ಕೊಟ್ಟರೆ ಎಲ್ಲವೂ ನಡೆಯುತ್ತದೆ ಎನ್ನುವಂತಾಗಿದೆ. ನಾನು ಯಾರಿಗೂ ಒಂದು ಪೈಸೆಯೂ ಕೊಡುವುದಿಲ್ಲ” ಎಂದು ಕಿಡಿಕಾರಿದರು.
ಘಟನೆ ವೇಳೆ ಕೆಲ ಬಿಜೆಪಿ ಪಾಲಿಕೆ ಸದಸ್ಯರು ಮಧ್ಯಪ್ರವೇಶಿಸಿ ಮಹಿಳಾ ಅಧಿಕಾರಿಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಅಧಿಕಾರಿಯ ಆಕ್ರೋಶದಿಂದಾಗಿ ಪಾಲಿಕೆ ಕಚೇರಿ ಆವರಣದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು.
