ನಾಡದ್ರೋಹಿಗಳ ಪುಂಡಾಟಿಕೆಗೆ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ಕೊಡ್ತಿದೆ ಸದನದಲ್ಲಿ ಮತ್ತೆ ಧ್ವನಿ ಎತ್ತಿದ ಜೆಡಿಎಸ್ ಶಾಸಕ ಅನ್ನದಾನಿ

ನಾಡದ್ರೋಹಿಗಳ ಪುಂಡಾಟಿಕೆಗೆ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ಕೊಡ್ತಿದೆ ಸದನದಲ್ಲಿ ಮತ್ತೆ ಧ್ವನಿ ಎತ್ತಿದ ಜೆಡಿಎಸ್ ಶಾಸಕ ಅನ್ನದಾನಿ

ಬೆಳಗಾವಿ ಗಡಿಯಲ್ಲಿ ಎಂಇಎಸ್, ಶಿವಸೇನೆ ಪುಂಡಾಟ ಇನ್ನು ನಿಂತಿಲ್ಲ. ಇದಕ್ಕೆಲ್ಲಾ ಮಹಾರಾಷ್ಟ್ರ ಸರ್ಕಾರ ಕುಮ್ಮಕ್ಕು ನೀಡುತ್ತಿದೆ ಎಂಬ ಅನುಮಾನ ಮೂಡುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಶಾಸಕ ಅನ್ನದಾನಿ ಮತ್ತೆ ಸದನದಲ್ಲಿ ಧ್ವನಿ ಎತ್ತಿದ್ದಾರೆ.ಬೆಳಗಾವಿಯ ಸುವರ್ಣಸೌಧದಲ್ಲಿ ಶುಕ್ರವಾರ ವಿಧಾನಮಂಡಲ ಅಧಿವೇಶನದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಅನ್ನದಾನಿ ಪದೇ ಪದೇ ಶಿವಸೇನೆ ಮತ್ತು ಎಂಇಎಸ್ ಸಂಘಟನೆಗಳು ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಮೊನ್ನೆ ಬೆಳಿಗ್ಗೆ ಗಡಿಯಲ್ಲಿ ನಮ್ಮ ಮುಖ್ಯಮಂತ್ರಿಗಳ ಭಾವಚಿತ್ರ ಮತ್ತು ಕನ್ನಡ ಧ್ವಜವನ್ನು ಸುಡುವ ನೀಚ ಕೆಲಸ ಮಾಡಿದ್ದಾರೆ. ಮಹಾರಾಷ್ಟ್ರ ಸರ್ಕಾರವೇ ಇದಕ್ಕೆ ಕುಮ್ಮಕ್ಕು ಕೊಡುತ್ತಿದೆಯೂ ಎಂಬ ಅನುಮಾನ ನನಗೆ ಮೂಡುತ್ತಿದೆ. ಈಗಾಗಲೇ ಕನ್ನಡಪರ ಸಂಘಟನೆಗಳು ಡಿಸೆಂಬರ್ 31ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಹೀಗಾಗಿ ಕನ್ನಡಿಗರನ್ನು ರಕ್ಷಣೆ ಮಾಡುವ ಜವಾಬ್ದಾರಿ ಈ ಸರ್ಕಾರದ ಮೇಲಿದೆ. ನಮ್ಮ ಅಸ್ಮಿತೆ ಆಗಿರುವ ಕನ್ನಡ ಧ್ವಜವನ್ನು ರಕ್ಷಣೆ ಮಾಡುವ ಅವಶ್ಯಕತೆಯಿದೆ. ಉಗ್ರವಾದ ಕ್ರಮವನ್ನು ತೆಗೆದುಕೊಳ್ಳದೇ ಇರುವುದರಿಂದ ಇಂತಹ ನೀಚ ಕೃತ್ಯವನ್ನು ಮುಂದುವರಿಯುತ್ತಿದೆ. ಓರ್ವ ಜವಾಬ್ದಾರಿಯುತ ಸದಸ್ಯರು ನಾನು ಮಹಾರಾಷ್ಟ್ರ ಧ್ವಜವನ್ನು ಹಿಡಿದುಕೊಂಡು ಓಡಾಡುತ್ತೇನೆ ಎಂದು ಕನ್ನಡದ ಬಗ್ಗೆ ಅಸಡ್ಡೆತನ ಪ್ರದರ್ಶಿಸಿದ್ರೆ ಹೇಗೆ..? ಇದು ಕನ್ನಡಿಗರ ಮನೆಯೇ ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಸಚಿವ ಗೋವಿಂದ ಕಾರಜೋಳ ಅವರು ಕಳೆದ ಕೆಲವು ದಿನಗಳಿಂದ ಅಧಿವೇಶನ ನಡೆಯುವ ಸಂದರ್ಭದಲ್ಲಿ ಈ ದೋಂಬಿಗಳನ್ನು ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಕೆಲವರನ್ನು ಬಂಧಿಸಿ ಜೈಲಿಗೆ ಅಟ್ಟಿ ಸರ್ಕಾರ ಕೆಲವು ಕ್ರಮ ಕೈಗೊಂಡಿದೆ. ಭಾಷೆ, ನೆಲ, ಜಲದ ಪ್ರಶ್ನೆ ಬಂದಾಗ ಖಂಡಿತವಾಗಲೂ ಕಠಿಣ ಕ್ರಮ ಕೈಗೊಳ್ಳುತ್ತದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಂದಿಗೂ ಹಿಂದೇಟು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಒಟ್ಟಿನಲ್ಲಿ ಇನ್ಮುಂದೆ ಯಾವತ್ತೂ ಕನ್ನಡಿಗರ ಹುಸಾಬರಿಗೆ ಬರದಂತೆ ನಾಡದ್ರೋಹಿ ಎಂಇಎಸ್‍ನವರಿಗೆ ತಕ್ಕಪಾಠ ಕಲಿಸಬೇಕು. ಅಲ್ಲದೇ ಮಹಾರಾಷ್ಟ್ರದಲ್ಲಿಯೂ ಕನ್ನಡಿಗರ ಮೇಲೆ ಯಾವುದೇ ರೀತಿ ದಬ್ಬಾಳಿಕೆ ಆಗದಂತೆ ಕ್ರಮ ಕೈಗೊಳ್ಳಬೇಕಿದೆ.