ಬೆಳಗಾವಿ: ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಿದ್ದಾಳೆ ಎನ್ನಲಾದ ಘಟನೆ ಚಿಕ್ಕೋಡಿ ತಾಲೂಕಿನ ಖಡಕಲಾಟ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು ಆರು ತಿಂಗಳ ಹಿಂದೆ ನಡೆದಿದ್ದ ಪ್ರಕರಣ ಇದೀಗ ಬಹಿರಂಗವಾಗಿದ್ದು, ಮೃತನ ಪತ್ನಿ ಬಂಗಾರಿ ಗಾವಡೆ ಹಾಗೂ ಆಕೆಯ ಪ್ರಿಯಕರ ರಾಮಾ ರಾಣಗೆ ಅವರನ್ನು ಖಡಕಲಾಟ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯನ್ನು ರಾಘು ಗಾವಡೆ (40) ಎಂದು ಗುರುತಿಸಲಾಗಿದೆ.
ರಾಘು ಗಾವಡೆ ಕೂಲಿ ಕೆಲಸ ಹಾಗೂ ಕುರಿ ಕಾಯುವ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಅವರ ಪತ್ನಿ ಬಂಗಾರಿಗೆ, ರಾಘು ಅವರ ಸಂಬಂಧಿಯಾಗಿರುವ ರಾಮಾ ರಾಣಗೆ ಅವರೊಂದಿಗೆ ಆಪ್ತ ಸಂಬಂಧವಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಪತಿ ವಿರೋಧ ವ್ಯಕ್ತಪಡಿಸುತ್ತಿದ್ದ ಹಿನ್ನೆಲೆಯಲ್ಲಿ ಆತನನ್ನು ಹತ್ಯೆ ಮಾಡಲು ಇಬ್ಬರೂ ಸಂಚು ರೂಪಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.
ಯೋಜನೆಯಂತೆ ರಾಘುವನ್ನು ಹೊಲದ ಬಳಿ ಕರೆಸಿಕೊಂಡು, ಬಂಗಾರಿ ಹಾಗೂ ರಾಮಾ ಸೇರಿ ಆತನ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಬಳಿಕ ಮೃತದೇಹವನ್ನು ಸ್ಥಳಾಂತರಿಸಿ, ರಾಘು ಕುರಿ ಕಾಯುವ ಕೆಲಸಕ್ಕಾಗಿ ಬೇರೆ ಜಿಲ್ಲೆಗೆ ತೆರಳಿದ್ದಾನೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ನಂಬಿಸುವ ಪ್ರಯತ್ನ ಮಾಡಲಾಗಿದೆ ಎನ್ನಲಾಗಿದೆ.
ಆದರೆ ಹಲವು ತಿಂಗಳು ಕಳೆದರೂ ರಾಘು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರಲ್ಲಿ ಅನುಮಾನ ಮೂಡತೊಡಗಿತ್ತು. ಈ ವೇಳೆ ರಾಘು ಅವರ ಸಹೋದರ ಲಗಮಣ್ಣ ಅವರಿಗೆ ಪ್ರಕರಣದ ಬಗ್ಗೆ ಅನುಮಾನ ಬಂದು ಗ್ರಾಮದ ಹಿರಿಯರ ಗಮನಕ್ಕೆ ತಂದಿದ್ದರು.
ನಂತರ ಗ್ರಾಮದ ಹಿರಿಯರು ಬಂಗಾರಿಯನ್ನು ವಿಚಾರಿಸಿದಾಗ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿ ಬಹಿರಂಗವಾಗಿದೆ ಎನ್ನಲಾಗಿದೆ. ಬಳಿಕ ಲಗಮಣ್ಣ ಅವರು ಖಡಕಲಾಟ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಖಡಕಲಾಟ ಪೊಲೀಸರು ಬಂಗಾರಿ ಗಾವಡೆ ಹಾಗೂ ರಾಮಾ ರಾಣಗೆ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಪೂರ್ಣ ಹಿನ್ನೆಲೆ, ಹತ್ಯೆಯ ಕಾರಣ ಹಾಗೂ ಮೃತದೇಹಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪೊಲೀಸರು ತನಿಖೆ ಮೂಲಕ ಪತ್ತೆಹಚ್ಚುತ್ತಿದ್ದಾರೆ.
