ಬೆಳಗಾವಿ: ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರ ಮತ್ತು ವೀಡಿಯೋಗ್ರಾಫರ್‌ಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಗರದ ರಾಮನಗರದಲ್ಲಿರುವ ವಿದ್ಯಾರಾಜ ಸಭಾಗೃಹದಲ್ಲಿ 187ನೇ ವಿಶ್ವ ಛಾಯಾಗ್ರಹಣ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಛಾಯಾಗ್ರಹಣ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ನಾಮದೇವ ಧನಾಯಿ ಹಾಗೂ ನಾರಾಯಣ್ ಗೌಂಡವಾಡಕರ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಿವಿಧ ಆಧುನಿಕ ಕ್ಯಾಮೆರಾಗಳು, ವೀಡಿಯೋಗ್ರಫಿ ಹಾಗೂ ಛಾಯಾಗ್ರಹಣಕ್ಕೆ ಸಂಬಂಧಿಸಿದ ನೂತನ ಉಪಕರಣಗಳ ಪ್ರದರ್ಶನವೂ ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಆಗಮಿಸಿದ್ದವರ ಗಮನ ಸೆಳೆಯಿತು.

ಸಂಘದ ಅಧ್ಯಕ್ಷ ಬಸವರಾಜ್ ರಾಮಣ್ಣವರ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ನಾರಾಯಣ ಬರಮನಿ ಅವರು ಮುಖ್ಯ ಅತಿಥಿಯಾಗಿ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (CBRSETI)ಯ ನಿರ್ದೇಶಕ ಪ್ರವೀಣ್ ಕೆ.ಎಸ್. ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರವೀಣ್ ಕೆ.ಎಸ್. ಅವರು, ಛಾಯಾಗ್ರಹಣ ಕ್ಷೇತ್ರದ ಬೆಳವಣಿಗೆ ಹಾಗೂ ನೂತನ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದರು. 1839ರಲ್ಲಿ ಫ್ರಾನ್ಸ್‌ನಲ್ಲಿ ಛಾಯಾಗ್ರಹಣ ಕ್ಷೇತ್ರದ ಮಹತ್ವದ ಬೆಳವಣಿಗೆ ಆರಂಭವಾಗಿದ್ದು, ವಿಶ್ವ ಛಾಯಾಗ್ರಹಣ ದಿನವು ಛಾಯಾಗ್ರಾಹಕರನ್ನು ಒಂದೇ ವೇದಿಕೆಗೆ ತರುವ ಪ್ರಮುಖ ಸಂದರ್ಭವಾಗಿದೆ ಎಂದು ಹೇಳಿದರು.

CBRSETI ವತಿಯಿಂದ ಪ್ರತಿವರ್ಷ 70 ಮಂದಿಗೆ ಉಚಿತವಾಗಿ 30 ದಿನಗಳ ಛಾಯಾಗ್ರಹಣ ಮತ್ತು ವೀಡಿಯೋಗ್ರಫಿ ತರಬೇತಿ ನೀಡಲಾಗುತ್ತಿದ್ದು, ಯುವಕರನ್ನು ವೃತ್ತಿಪರರನ್ನಾಗಿ ರೂಪಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಪ್ರದರ್ಶನದಲ್ಲಿ ಅಳವಡಿಸಲಾಗಿರುವ ನೂತನ ತಂತ್ರಜ್ಞಾನ ಹಾಗೂ ಆಧುನಿಕ ಉಪಕರಣಗಳ ಕುರಿತು ಶಿಬಿರಾರ್ಥಿಗಳು ಮಾಹಿತಿ ಪಡೆದು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಂಗವಾಗಿ ಛಾಯಾಗ್ರಹಣ ಕ್ಷೇತ್ರದ ಸಾಧಕರಾದ ನಾಮದೇವ ಧನಾಯಿ ಹಾಗೂ ನಾರಾಯಣ್ ಗೌಂಡವಾಡಕರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಮಾದರಿಯ ಆಧುನಿಕ ಕ್ಯಾಮೆರಾಗಳು, ವೀಡಿಯೋಗ್ರಫಿ ಹಾಗೂ ಫೋಟೋಗ್ರಫಿ ಉಪಕರಣಗಳ ಪ್ರದರ್ಶನವು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಪ್ರಕಾಶ್ ಕಳಸದ್, ಖಜಾಂಚಿ ಸುರೇಶ್ ಮುರಕುಂಬಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸುಭಾಷ್ ಓವುಳಕರ, ವಿಜಯಕುಮಾರ ತುಪ್ಪದ, ನಾಮದೇವ ಕೋಳೇಕರ ಸೇರಿದಂತೆ ಹಲವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Leave a Reply

Your email address will not be published. Required fields are marked *