ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೋಮವಾರ ಪಾಲಿಕೆ ಪರಿಷತ್ ಸಭಾಭವನದಲ್ಲಿ ನಡೆಯಿತು. ನಾಲ್ಕೂ ಸಮಿತಿಗಳಿಗೆ ತಲಾ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.
ಇತ್ತೀಚೆಗಷ್ಟೇ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳಿಗೆ ಒಟ್ಟು 28 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು. ಸೋಮವಾರ ನಡೆದ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿ ಸಮಿತಿಗೆ ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಮೇಯರ್ ಪ್ರೀತಿ ಕಾಮಕರ್ ಅವರು ನಾಲ್ವರು ಅಧ್ಯಕ್ಷರ ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಆಯ್ಕೆಯಾದ ಸ್ಥಾಯಿ ಸಮಿತಿ ಅಧ್ಯಕ್ಷರು
- ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ: ರಮೇಶ ಮೈಲುಗೋಳ
- ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ರಾಜು ಭಾತಕಾಂಡೆ
- ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ: ಶ್ರೇಯಸ್ ನಾಕಾಡಿ
- ಲೆಕ್ಕಗಳ ಸ್ಥಾಯಿ ಸಮಿತಿ: ಸಾರಿಕಾ ಪಾಟೀಲ
ನೂತನ ಅಧ್ಯಕ್ಷರುಗಳು ಅಧಿಕಾರ ವಹಿಸಿಕೊಂಡು ಪಾಲಿಕೆಯ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಕಾರ್ಯಗಳಿಗೆ ಸಂಬಂಧಿಸಿದಂತೆ ಸಮಿತಿಗಳ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ಉಪಮೇಯರ್ ಹಣಮಂತ ಕೊಂಗಾಲಿ, ಪಾಲಿಕೆ ಆಯುಕ್ತ ಕಾರ್ತಿಕ್ ಎಂ., ಆಡಳಿತ ಪಕ್ಷದ ನಾಯಕ ಸಂತೋಷ ಪೇಡ್ನೇಕರ, ವಿರೋಧ ಪಕ್ಷದ ನಾಯಕ ಸೊಹೈಲ್ ಸಂಗೊಳ್ಳಿ, ಸ್ಥಾಯಿ ಸಮಿತಿ ಸದಸ್ಯರು ಹಾಗೂ ನಗರಸೇವಕರು ಉಪಸ್ಥಿತರಿದ್ದರು.
ಚುನಾವಣಾ ಅಧಿಕಾರಿ ಹಾಗೂ ಪರಿಷತ್ ಕಾರ್ಯದರ್ಶಿ ರಮೇಶ ಬಡಿಗೇರ, ಪರಿಷತ್ ವ್ಯವಸ್ಥಾಪಕಿ ಅಂಜನಾ ಭಜಂತ್ರಿ ಸೇರಿದಂತೆ ಪಾಲಿಕೆಯ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
