ಬೆಳಗಾವಿ: ಇತ್ತೀಚೆಗೆ ಪಶ್ಚಿಮ ಘಟ್ಟ ಹಾಗೂ ತಿಲಾರಿ ಭಾಗದಲ್ಲಿ ಸುರಿದ ಭಾರಿ ಮಳೆಯಿಂದ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಪೂರೈಕೆಗೆ ಹೊಸ ಭರವಸೆ ಮೂಡಿದೆ.

ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಇಂದು ರಕ್ಕಸಕೊಪ್ಪ ಜಲಾಶಯಕ್ಕೆ ಭೇಟಿ ನೀಡಿ ನೀರಿನ ಮಟ್ಟ, ಒಳಹರಿವು, ಹೊರಹರಿವು ಹಾಗೂ ಜಲಾಶಯದ ಸಾಮರ್ಥ್ಯವನ್ನು ಪರಿಶೀಲಿಸಿದರು.

ಕಳೆದ ಕೆಲವು ತಿಂಗಳುಗಳಲ್ಲಿ ಮಾನ್ಸೂನ್ ವಿಳಂಬವಾದ ಕಾರಣ ಜಲಾಶಯ ಸಂಪೂರ್ಣ ಖಾಲಿಯಾಗಿತ್ತು. ಇದರ ಪರಿಣಾಮವಾಗಿ ನಗರದಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಉಂಟಾಗಿ, ಪಾಲಿಕೆಯು ಪರ್ಯಾಯ ನೀರು ಪೂರೈಕೆ ವ್ಯವಸ್ಥೆ ಜಾರಿಗೆ ತಂದಿತ್ತು.
ಆದರೆ, ಕಳೆದ ಕೆಲವು ದಿನಗಳಿಂದ ಪ್ರತಿದಿನ 40 ರಿಂದ 50 ಮಿ.ಮೀ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ನಗರದ ಜನರಲ್ಲಿ ಸಂತಸ ಮನೆ ಮಾಡಿದೆ.

ಪರಿಶೀಲನೆಯ ಬಳಿಕ ಮಾತನಾಡಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು, ರಕ್ಕಸಕೊಪ್ಪ ಹಾಗೂ ಹಿಡಕಲ್ ಜಲಾಶಯಗಳಿಂದ ಒಟ್ಟು 105 ಎಂಎಲ್‌ಡಿ ನೀರು ನಗರಕ್ಕೆ ಪೂರೈಕೆಯಾಗುತ್ತಿದೆ ಎಂದು ತಿಳಿಸಿದರು.

ಪ್ರಸ್ತುತ 10 ವಾರ್ಡ್‌ಗಳಲ್ಲಿ 24×7 ನೀರು ಸರಬರಾಜು ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆ. ನೀರಿನ ಕೊರತೆಯ ಸಂದರ್ಭದಲ್ಲಿ ಎರಡು-ಮೂರು ದಿನಗಳಿಗೊಮ್ಮೆ ಕೇವಲ ಎರಡು ಗಂಟೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ಜಲಾಶಯ ಭರ್ತಿಯಾಗಿರುವುದರಿಂದ ಈ ವಾರ್ಡ್‌ಗಳಲ್ಲಿ ಮತ್ತೆ ನಿರಂತರ ನೀರು ಸರಬರಾಜು ಆರಂಭವಾಗಲಿದೆ ಎಂದರು.

ಉಳಿದ 48 ವಾರ್ಡ್‌ಗಳಲ್ಲಿ ಬೇಸಿಗೆಯಲ್ಲಿ 8 ರಿಂದ 10 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿತ್ತು. ಈಗ ಪರಿಸ್ಥಿತಿ ಸುಧಾರಿಸಿದ್ದು, 2 ರಿಂದ 3 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ.

2475 ಅಡಿ ಎತ್ತರ ಹೊಂದಿರುವ ರಕ್ಕಸಕೊಪ್ಪ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ರಕ್ಕಸಕೊಪ್ಪ ಮತ್ತು ಹಿಡಕಲ್ ಜಲಾಶಯಗಳಲ್ಲಿರುವ ನೀರಿನ ಸಂಗ್ರಹದಿಂದ ಮುಂದಿನ ಮೇ ತಿಂಗಳವರೆಗೆ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಆಯುಕ್ತರು ವಿಶ್ವಾಸ ವ್ಯಕ್ತಪಡಿಸಿದರು.

ಈ ವೇಳೆ ಕೆಯುಡಿಎಫ್‌ಸಿ ಅಭಿಯಂತರರು, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *