ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ್ ರಾಜೀನಾಮೆಗೆ ಆಗ್ರಹಿಸಿ ಆ.19ರಂದು ನಾಳೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ರಾಜಕುಮಾರ ಟೋಪಣ್ಣವರ ಹಾಗೂ ಸುಜೀತ್ ಮುಳಗುಂದ ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಅಭಯ ಪಾಟೀಲ್ ವಿರುದ್ಧ 2012ರಿಂದಲೇ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪಕ್ಕೆ ಸಂಬಂಧಿಸಿದ ಪ್ರಕರಣವಿದ್ದು, ಸುಪ್ರೀಂ ಕೋರ್ಟ್ ಆದೇಶದ ಬಳಿಕ ಕರ್ನಾಟಕ ಲೋಕಾಯುಕ್ತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಂಡಿದೆ ಎಂದು ಟೋಪಣ್ಣವರ ಹಾಗೂ ಮುಳಗುಂದ ತಿಳಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ತನಿಖೆಯ ವರದಿಯಲ್ಲಿ, ಶಾಸಕರ ಆದಾಯಕ್ಕೆ ಹೋಲಿಸಿದರೆ ಶೇ.128.01ರಷ್ಟು ಹೆಚ್ಚಿನ ಆಸ್ತಿ ಹೊಂದಿರುವ ಆರೋಪ ಉಲ್ಲೇಖವಾಗಿದೆ ಎಂದು ಅವರು ಹೇಳಿದ್ದಾರೆ. ಪ್ರಕರಣ ಹಲವು ವರ್ಷಗಳಿಂದ ವಿಚಾರಣೆಯಲ್ಲಿದ್ದು, ಸುಪ್ರೀಂ ಕೋರ್ಟ್ ಮಧ್ಯಪ್ರವೇಶದ ನಂತರ ತನಿಖೆ ವೇಗ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಜನಪ್ರತಿನಿಧಿಯೊಬ್ಬರು, ಇತರ ಜನಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ರಾಜೀನಾಮೆಗೆ ಆಗ್ರಹಿಸುವ ನೈತಿಕ ಹಕ್ಕು ಹೊಂದಿದ್ದಾರೆಯೇ? ಎಂಬ ಪ್ರಶ್ನೆಯನ್ನು ಟೋಪಣ್ಣವರ ಹಾಗೂ ಮುಳಗುಂದ ಅವರು ಮುಂದಿಟ್ಟಿದ್ದಾರೆ.
ಜನಪ್ರತಿನಿಧಿಗಳ ವಿಚಾರದಲ್ಲಿ ಒಂದೇ ರೀತಿಯ ನೈತಿಕ ಮಾನದಂಡ ಅನ್ವಯಿಸಬೇಕು ಎಂದು ಒತ್ತಾಯಿಸಿರುವ ಅವರು, ಅಭಯ ಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಧರಣಿ ಮೂಲಕ ಆಗ್ರಹಿಸಲಾಗುವುದು ಎಂದಿದ್ದಾರೆ.
ಈ ಧರಣಿಯನ್ನು ಭ್ರಷ್ಟಾಚಾರ ವಿರೋಧಿ ಹೋರಾಟವಾಗಿ ನಡೆಸಲಾಗುತ್ತಿದ್ದು, ಸಾರ್ವಜನಿಕರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಸ್ಪಷ್ಟೀಕರಣ: ಈ ವರದಿಯಲ್ಲಿ ಉಲ್ಲೇಖಿಸಿರುವ ಆರೋಪಗಳು ರಾಜಕುಮಾರ ಟೋಪಣ್ಣವರ ಹಾಗೂ ಸುಜೀತ್ ಮುಳಗುಂದ ಅವರು ನೀಡಿರುವ ಹೇಳಿಕೆಗಳ ಆಧಾರಿತವಾಗಿವೆ. ಆರೋಪಗಳು ಸಾಬೀತಾಗಿವೆ ಎಂದು ವರದಿ ಅರ್ಥೈಸುವುದಿಲ್ಲ.
