ಬೆಳಗಾವಿ ಮಹಾನಗರದ ಮತದಾರರಿಗೆ ಮಹತ್ವದ ಮಾಹಿತಿ ನೀಡಿದ ಪಾಲಿಕೆ ಆಯುಕ್ತ ಕಾರ್ತಿಕ್ ಎಂ.
ಬೆಳಗಾವಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೊದಲ ಹಂತ ಪೂರ್ಣಗೊಂಡಿದ್ದು, ಕರಡು ಮತದಾರರ ಪಟ್ಟಿ ಪ್ರಕಟವಾಗಿದೆ. ಆದರೆ ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಕಾಣಿಸುತ್ತಿಲ್ಲ ಎಂದು ಯಾರೂ ಆತಂಕಪಡಬೇಕಾಗಿಲ್ಲ ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಹಾಗೂ ಮತದಾರರ ಮುಖ್ಯ ನೋಂದಣಾಧಿಕಾರಿ ಕಾರ್ತಿಕ್ ಎಂ. ಸ್ಪಷ್ಟಪಡಿಸಿದ್ದಾರೆ.
ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ಮಾಹಿತಿ ನೀಡಿದ ಅವರು, ಕರಡು ಪಟ್ಟಿಯಿಂದ ಹೆಸರು ಹೊರಗುಳಿದಿರುವವರಿಗೆ ತಮ್ಮ ಹೆಸರು ಸೇರ್ಪಡೆಗೊಳಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದ್ದಾರೆ.
ಕರಡು ಪಟ್ಟಿಯಲ್ಲಿ ಹೆಸರು ಏಕೆ ಇಲ್ಲ?
SIR ಪ್ರಕ್ರಿಯೆಯಲ್ಲಿ ಅನುಮಾನಾಸ್ಪದ ಮತದಾರರು, ಸ್ಥಳಾಂತರಗೊಂಡವರು, ಮೃತಪಟ್ಟವರು ಸೇರಿದಂತೆ ವಿವಿಧ ಕಾರಣಗಳಿಂದ ಕೆಲವರ ಹೆಸರು ಕರಡು ಪಟ್ಟಿಯಲ್ಲಿ ಕಾಣಿಸದಿರಬಹುದು. ಇಂತಹವರು ಸೂಕ್ತ ದಾಖಲೆಗಳೊಂದಿಗೆ ತಮ್ಮ ಹಕ್ಕು ಮಂಡಿಸಿ ಪಟ್ಟಿಗೆ ಸೇರ್ಪಡೆಗೊಳ್ಳಬಹುದು.
ಇದರ ಜೊತೆಗೆ ಮ್ಯಾಪಿಂಗ್ ಅಥವಾ ಲಿಂಕೇಜ್ ಆಗದಿರುವವರು ಹಾಗೂ ಹೊಸ ಮತದಾರರು ಕೂಡ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ.
ಏನು ಮಾಡಬೇಕು?
ಕರಡು ಪಟ್ಟಿಯಲ್ಲಿ ಹೆಸರು ಇಲ್ಲದವರು ಆತಂಕಪಡದೆ ಸಂಬಂಧಿಸಿದ SIR ವಿಭಾಗವನ್ನು ಸಂಪರ್ಕಿಸಬೇಕು. ಆಕ್ಷೇಪಣೆ ಸಲ್ಲಿಸಿದ ಬಳಿಕ ಅಗತ್ಯವಿದ್ದರೆ ವಿಚಾರಣಾಧಿಕಾರಿ ಅಥವಾ AERO ಮುಂದೆ ಹಾಜರಾಗಿ ಪೂರಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಹೊಸ ಮತದಾರರು ಫಾರ್ಮ್ ನಂ.6 ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು.
ಸೆ.23 ಕೊನೆಯ ಅವಕಾಶ!
ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆ ಹಾಗೂ ಹಕ್ಕು ಮಂಡಿಸಲು ಅವಕಾಶ ನೀಡಲಾಗಿದೆ.
ವಿಲೇವಾರಿ ಪ್ರಕ್ರಿಯೆ ಅಕ್ಟೋಬರ್ 22ರೊಳಗೆ ಪೂರ್ಣಗೊಳ್ಳಲಿದ್ದು, ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದ ಅಂಕಿ-ಅಂಶ
- ಒಟ್ಟು ಮತದಾರರು: 2,52,937
- ಗಣಕೀಕರಣಗೊಂಡ ನಮೂನೆಗಳು: 1,93,755
- ಗಣಕೀಕರಣ ಪ್ರಮಾಣ: 76.60%
- ASDDO ಪಟ್ಟಿಯಲ್ಲಿರುವವರು: 59,182
ಬೆಳಗಾವಿ ಉತ್ತರ ಕ್ಷೇತ್ರದ ಅಂಕಿ-ಅಂಶ
- ಒಟ್ಟು ಮತದಾರರು: 2,56,678
- ಗಣಕೀಕರಣಗೊಂಡ ನಮೂನೆಗಳು: 1,92,372
- ಗಣಕೀಕರಣ ಪ್ರಮಾಣ: 74.95%
- ASDDO ಪಟ್ಟಿಯಲ್ಲಿರುವವರು: 64,306
ಆಯುಕ್ತರಿಂದ ಮನವಿ
SIR ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಳ್ಳಲು ಜಿಲ್ಲಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಉತ್ತಮ ಮಾರ್ಗದರ್ಶನ ನೀಡಿದ್ದಾರೆ. ಮಹಾನಗರದ ನಾಗರಿಕರು, ಮೇಯರ್, ಉಪಮೇಯರ್, ನಗರಸೇವಕರು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹಾಗೂ ಮಾಧ್ಯಮದವರು ಸಹಕಾರ ನೀಡಿದ್ದಾರೆ. SIR ಕಾರ್ಯಕ್ಕೆ ನಿಯೋಜನೆಗೊಂಡ ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಶಿಕ್ಷಕರು ಹಗಲಿರುಳು ಶ್ರಮಿಸಿದ್ದಾರೆ ಎಂದು ಆಯುಕ್ತ ಕಾರ್ತಿಕ್ ಎಂ. ತಿಳಿಸಿ, ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.
ಮುಖ್ಯವಾಗಿ: ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದಿದ್ದರೆ ಮತದಾನದ ಹಕ್ಕು ಕಳೆದುಕೊಂಡಿದ್ದೀರಿ ಎಂದರ್ಥವಲ್ಲ. ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಿ, ಅಗತ್ಯ ದಾಖಲೆಗಳನ್ನು ನೀಡಿ ಹೆಸರು ಸೇರ್ಪಡೆಗೆ ಅವಕಾಶ ಪಡೆಯಬಹುದು.
ಕರಡು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳಿ.
