ಬೆಳಗಾವಿ: ಗಣೇಶೋತ್ಸವವನ್ನು ಶಾಂತಿ, ಸೌಹಾರ್ದತೆ ಹಾಗೂ ಶಿಸ್ತಿನಿಂದ ಆಚರಿಸುವಂತೆ ಗಣೇಶ ಮಂಡಳಿಗಳಿಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಸೂಚನೆ ನೀಡಿದ್ದಾರೆ. ಗಣೇಶೋತ್ಸವದ ವೇಳೆ ಡಿಜೆ ಬಳಕೆಗೆ ಯಾವುದೇ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗುರುವಾರ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ನಡೆದ ಗಣೇಶೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷವೂ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಅನುಮತಿ ನೀಡಿರಲಿಲ್ಲ. ಪೊಲೀಸ್ ಇಲಾಖೆಯ ಈ ಕ್ರಮಕ್ಕೆ ಹಿರಿಯ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ತಿಳಿಸಿದರು.
12 ಅಡಿ ಮೀರದ ಗಣೇಶ ಮೂರ್ತಿ
ಬೆಳಗಾವಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಕ್ಕಾಗಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಎತ್ತರವನ್ನು 12 ಅಡಿಗೆ ಮಿತಿಗೊಳಿಸಲಾಗಿದೆ. ಮಂಡಳಿಗಳು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಆಯುಕ್ತರು ಸೂಚಿಸಿದರು.
ಅದೇ ರೀತಿ ಪೆಂಡಾಲ್‌ಗಳ ವಿನ್ಯಾಸದಲ್ಲಿ ಅನಗತ್ಯವಾಗಿ ದೊಡ್ಡ ಪ್ರಮಾಣದ ನಿರ್ಮಾಣ ಮಾಡದಂತೆ ಎಚ್ಚರಿಕೆ ನೀಡಿದರು. ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಸ್ಥಳಗಳಲ್ಲಿ ವಿಸರ್ಜನೆಗೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆ ಮಾಡಬೇಕು ಎಂದರು.
ಮೂರ್ತಿಗಳಿಗೆ ‘ಹುಕ್’ ಅಳವಡಿಸಲು ಸೂಚನೆ
ಗಣೇಶ ಮೂರ್ತಿಗಳಿಗೆ ವಿಸರ್ಜನೆ ಸಂದರ್ಭದಲ್ಲಿ ಸುಲಭವಾಗಿ ನಿರ್ವಹಿಸಲು ಅನುಕೂಲವಾಗುವ ರೀತಿಯಲ್ಲಿ ಹುಕ್ ಅಳವಡಿಸುವಂತೆ ಮೂರ್ತಿಕಾರರಿಗೆ ಗಣೇಶ ಮಂಡಳಿಗಳು ಸೂಚಿಸಬೇಕು ಎಂದು ಬೊರಸೆ ಹೇಳಿದರು. ಇದರಿಂದ ವಿಸರ್ಜನಾ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸಲು ಪೊಲೀಸರಿಗೆ ಸಹಕಾರಿಯಾಗಲಿದೆ ಎಂದರು.
14 ಲಕ್ಷ ಜನರ ನಗರದಲ್ಲಿ ಸಂಚಾರ ನಿರ್ವಹಣೆ ಸವಾಲು
ಬೆಳಗಾವಿ ನಗರದಲ್ಲಿ ಸುಮಾರು 14 ಲಕ್ಷ ಜನಸಂಖ್ಯೆ ಇರುವ ಹಿನ್ನೆಲೆಯಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ಭದ್ರತೆ ಹಾಗೂ ಸಂಚಾರ ನಿಯಂತ್ರಣ ಪೊಲೀಸರಿಗೆ ದೊಡ್ಡ ಸವಾಲಾಗಿದೆ ಎಂದು ಆಯುಕ್ತರು ಹೇಳಿದರು.
ಗಣೇಶೋತ್ಸವ ನಡೆಯಲಿ ಅಥವಾ ಇಲ್ಲದಿರಲಿ ನಗರದಲ್ಲಿ ಪೊಲೀಸ್ ಬಂದೋಬಸ್ತ್ ಮಾಡುವುದು ಇಲಾಖೆಯ ಜವಾಬ್ದಾರಿ. ಹೀಗಾಗಿ ಗಣೇಶ ಮಂಡಳಿಗಳು ಸಂಚಾರ ನಿರ್ವಹಣೆ ಹಾಗೂ ಪೊಲೀಸ್ ಕಾರ್ಯಾಚರಣೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪ್ರತಿ ಮಂಡಳಿಗೆ ಸಿಬ್ಬಂದಿ, ಸಿಸಿ ಕ್ಯಾಮೆರಾ ಕಡ್ಡಾಯ
ಗಣೇಶೋತ್ಸವದ ಸಂದರ್ಭದಲ್ಲಿ ಪ್ರತಿ ಗಣೇಶ ಮಂಡಳಿಯಲ್ಲೂ ಒಬ್ಬ ಸಿಬ್ಬಂದಿಯನ್ನು ನಿಯೋಜಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಪೆಂಡಾಲ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಕಡ್ಡಾಯವಾಗಿದ್ದು, ಇದರಿಂದ ಸರಗಳ್ಳತನ, ಜೇಬುಗಳ್ಳತನ ಸೇರಿದಂತೆ ವಿವಿಧ ರೀತಿಯ ಕಳ್ಳತನಗಳನ್ನು ತಡೆಗಟ್ಟಲು ಸಹಾಯವಾಗಲಿದೆ ಎಂದರು.
ರಾತ್ರಿ 10ರ ಬಳಿಕ ಸೌಂಡ್‌ಗೆ ಅವಕಾಶವಿಲ್ಲ
ಗಣೇಶೋತ್ಸವದ ಸಂದರ್ಭದಲ್ಲಿ ಸಂಗೀತ ಕಾರ್ಯಕ್ರಮ ನಡೆಸುವ ಮಂಡಳಿಗಳು ನಿಯಮಗಳನ್ನು ಪಾಲಿಸಬೇಕು. ಅಶ್ಲೀಲ ಅಥವಾ ಆಕ್ಷೇಪಾರ್ಹ ಹಾಡುಗಳನ್ನು ಪ್ರಸಾರ ಮಾಡಬಾರದು. ರಾತ್ರಿ 10 ಗಂಟೆಯ ನಂತರ ಯಾವುದೇ ರೀತಿಯ ಸೌಂಡ್ ಸಿಸ್ಟಂ ಬಳಸಲು ಅವಕಾಶವಿಲ್ಲ ಎಂದು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ಸ್ಪಷ್ಟಪಡಿಸಿದರು.
ಗಣೇಶೋತ್ಸವವನ್ನು ಎಲ್ಲರೂ ಶಾಂತಿ, ಸೌಹಾರ್ದತೆ ಮತ್ತು ಸಂಭ್ರಮದಿಂದ ಆಚರಿಸುವ ಮೂಲಕ ಬೆಳಗಾವಿಯ ಗಣೇಶೋತ್ಸವಕ್ಕೆ ಉತ್ತಮ ಹೆಸರು ತರುವಂತೆ ಅವರು ಗಣೇಶ ಮಂಡಳಿಗಳಿಗೆ ಕರೆ ನೀಡಿದರು.
