ಬೆಳಗಾವಿ: ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಹಾಗೂ ಸೈಬರ್ ಅಪರಾಧಗಳ ತನಿಖೆಯಲ್ಲಿ ಗಮನಾರ್ಹ ಸೇವೆ ಸಲ್ಲಿಸಿರುವ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಬಿ.ಆರ್. ಗಡೇಕರ್ ಅವರಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನೀಡಲಾಗುವ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಲಭಿಸಿದೆ.
ಪೊಲೀಸ್ ಇಲಾಖೆಯಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗಡೇಕರ್ ಅವರು ಗಂಭೀರ ಅಪರಾಧ ಪ್ರಕರಣಗಳ ಪತ್ತೆ, ಆರೋಪಿಗಳ ಬಂಧನ ಹಾಗೂ ಸಾರ್ವಜನಿಕರೊಂದಿಗೆ ಜನಸ್ನೇಹಿ ರೀತಿಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಗಮನ ಸೆಳೆದಿದ್ದಾರೆ. ಅವರ ಸಾಧನೆಗೆ ಇದೀಗ ರಾಷ್ಟ್ರಮಟ್ಟದ ಗೌರವ ದೊರೆತಿರುವುದು ಬೆಳಗಾವಿ ಪೊಲೀಸ್ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ.
2005ರಲ್ಲಿ ಪಿಎಸ್‌ಐ ಆಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾದ ಗಡೇಕರ್ ಅವರು ಮಹಾಲಿಂಗಪುರ, ಇಳಕಳ ಹಾಗೂ ಮಾಳಮಾರುತಿ ಪೊಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2016ರಲ್ಲಿ ಸಿಪಿಐ ಹುದ್ದೆಗೆ ಬಡ್ತಿ ಪಡೆದ ಬಳಿಕ ಸಿಸಿಬಿ ವಿಶೇಷ ಪೊಲೀಸ್ ಠಾಣೆ, ಮಾಳಮಾರುತಿ ಪೊಲೀಸ್ ಠಾಣೆ ಹಾಗೂ ಸಿಇಎನ್ ಅಪರಾಧ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಪಿಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಹಲವು ಗಂಭೀರ ಪ್ರಕರಣಗಳ ಪತ್ತೆ
ಕೊಲೆ, ದರೋಡೆ, ಮನೆಗಳ್ಳತನ, ಸರಗಳ್ಳತನ, ಮಾದಕ ವಸ್ತು ಸಾಗಾಟ, ಸೈಬರ್ ವಂಚನೆ ಹಾಗೂ ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ಪ್ರಕರಣಗಳ ತನಿಖೆಯಲ್ಲಿ ಗಡೇಕರ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಸರಣಿ ಸರಗಳ್ಳತನದಲ್ಲಿ ತೊಡಗಿದ್ದ ಇರಾನಿ ಗ್ಯಾಂಗ್ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ 28 ಪ್ರಕರಣಗಳನ್ನು ಭೇದಿಸಿ 1,049 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿತ್ತು. ಸಿಸಿಬಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ 59 ಮನೆಗಳ್ಳತನ ಪ್ರಕರಣಗಳನ್ನು ಪತ್ತೆಹಚ್ಚಿ, 1,516 ಗ್ರಾಂ ಚಿನ್ನ ಹಾಗೂ 3,308 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಹಿಂಡಲಗಾ ಜೈಲಿನಲ್ಲಿದ್ದ ಭೂಗತ ರೌಡಿಯನ್ನು ಜೈಲಿನಿಂದ ಬಿಡಿಸಿಕೊಳ್ಳಲು ನಡೆಸಲಾಗಿದ್ದ ಸಂಚನ್ನು ವಿಫಲಗೊಳಿಸಿದ ಕಾರ್ಯಾಚರಣೆಯಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ವೇಳೆ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಸೈಬರ್ ವಂಚನೆ ವಿರುದ್ಧ ಪರಿಣಾಮಕಾರಿ ಕಾರ್ಯಾಚರಣೆ
ಸೈಬರ್ ಅಪರಾಧಗಳ ನಿಯಂತ್ರಣದಲ್ಲಿಯೂ ಗಡೇಕರ್ ಅವರ ಸೇವೆ ಗಮನಾರ್ಹವಾಗಿದೆ. 2020ರಿಂದ 2022ರವರೆಗೆ ದಾಖಲಾಗಿದ್ದ 133 ಸೈಬರ್ ಹಣಕಾಸು ವಂಚನೆ ಪ್ರಕರಣಗಳಲ್ಲಿ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಿಸಿ, ಸಂತ್ರಸ್ತರಿಗೆ ಒಟ್ಟು ₹4.95 ಕೋಟಿ ಹಣವನ್ನು ಮರಳಿ ಕೊಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2024ರಲ್ಲಿ ನಡೆದ ಡಿಜಿಟಲ್ ಅರೆಸ್ಟ್ ಪ್ರಕರಣದ ತನಿಖೆಯಲ್ಲಿ ಗುಜರಾತ್‌ನಿಂದ ಆರೋಪಿಗಳನ್ನು ಬಂಧಿಸಿ, ₹1.11 ಕೋಟಿ ಹಣವನ್ನು ಫ್ರೀಜ್ ಮಾಡಿಸಲಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತರಿಗೆ ₹30 ಲಕ್ಷ ಹಣವನ್ನು ಮರಳಿ ಕೊಡಿಸುವಲ್ಲಿಯೂ ಅವರು ಪ್ರಮುಖ ಪಾತ್ರ ವಹಿಸಿದ್ದರು.
ಫ್ರಾಡ್ ಕಾಲ್ ಸೆಂಟರ್ ವಿರುದ್ಧ ದಾಳಿ
2025ರಲ್ಲಿ ನಡೆದ ಅಂತರರಾಷ್ಟ್ರೀಯ ಫ್ರಾಡ್ ಕಾಲ್ ಸೆಂಟರ್ ವಿರುದ್ಧದ ಕಾರ್ಯಾಚರಣೆಯಲ್ಲಿಯೂ ಗಡೇಕರ್ ಪ್ರಮುಖ ಪಾತ್ರ ವಹಿಸಿದ್ದರು. ಅಮೆರಿಕದ ಹಿರಿಯ ನಾಗರಿಕರನ್ನು ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ 33 ಮಂದಿಯನ್ನು ಬಂಧಿಸುವ ಕಾರ್ಯಾಚರಣೆ ನಡೆಸಲಾಗಿತ್ತು.
ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲಿಯೂ ಗಮನಾರ್ಹ ಸಾಧನೆ ಮಾಡಿರುವ ಅವರು, 50 ಕೆಜಿ 452 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಹಲವು ಪ್ರಮುಖ ಪ್ರಕರಣಗಳಲ್ಲಿ ಪರಿಣಾಮಕಾರಿ ತನಿಖೆ ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆಯಾಗುವಂತೆ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವಲ್ಲಿಯೂ ಗಡೇಕರ್ ಅವರ ಸೇವೆ ಗಮನಾರ್ಹವಾಗಿದೆ.
ಪೊಲೀಸ್ ಇಲಾಖೆಯ ಸೇವಾ ಅವಧಿಯಲ್ಲಿ ಡಿಜಿ ಮತ್ತು ಐಜಿಪಿ, ಎಡಿಜಿಪಿ ಹಾಗೂ ಪೊಲೀಸ್ ಆಯುಕ್ತರಿಂದ ಹಲವು ಬಾರಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರಗಳನ್ನು ಪಡೆದಿರುವ ಗಡೇಕರ್ ಅವರಿಗೆ ಇದೀಗ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ದೊರೆತಿರುವುದು ಅವರ ಸೇವೆಗೆ ಸಂದಿರುವ ಮಹತ್ವದ ಗೌರವವಾಗಿದೆ.
